ಪ್ರಪಂಚದಲ್ಲಿ ಯಾವುದಾದರೂ ಪ್ರಾಣಿಗಳು ಹೃದಯಾಘಾತ ಅಥವಾ ಲಕ್ವಾ ಒಡೆದು ಸತ್ತ ಉದಾಹರಣೆಗಳಿವೆಯೇ? ಖಂಡಿತ ಇಲ್ಲ. ಏಕೆಂದರೆ ಅವುಗಳು ದಿನದ ಮೂರನೇ ಒಂದು ಭಾಗ ಅಂದರೆ ಎಂಟು ಗಂಟೆಗಳಿಗಿಂತ ಜಾಸ್ತಿ ನಿದ್ರೆ ಮಾಡುತ್ತವೆ.
ಇನ್ನು ಮನುಷ್ಯರ ವಿಚಾರಕ್ಕೆ ಬಂದರೆ ವಯಸ್ಕರಿಗೆ 8 ನಿದ್ರೆಯ ಅವಶ್ಯಕತೆ ಇದ್ದರೆ, ಮಕ್ಕಳಿಗೆ 10 ಗಂಟೆ ನಿದ್ರೆಯ ಅವಶ್ಯಕತೆ ಇರುತ್ತದೆ. ಇನ್ನು ಸರಳವಾಗಿ ಹೇಳಬೇಕಾದರೆ ಮೊಬೈಲನ್ನು ಅರ್ಧ ಚಾರ್ಜ್ ಮಾಡಿದರೆ ಎಷ್ಟು ಹೊತ್ತು ಉಪಯೋಗಿಸಬಹುದೋ, ಹಾಗೆ, ಮನುಷ್ಯ ಅರ್ಧ ನಿದ್ರೆ ಮಾಡಿದರೆ ಸರಿಯಾಗಿ ಅರ್ಧದಷ್ಟು ಕೆಲಸವನ್ನು ಅವರಿಂದ ನಿರೀಕ್ಷಿಸಲು ಮಾತ್ರ ಸಾಧ್ಯ.
ಇನ್ನು ಸ್ಪಷ್ಟವಾಗಿ ಹೇಳಬೇಕಾದರೆ ಸರಿಯಾಗಿ ನಿದ್ದೆ ಮಾಡದೆ ಹೋದರೆ, ಅದು ಮಕ್ಕಳ ಕಲಿಕೆ, ನೆನಪಿನ ಶಕ್ತಿ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ವಯಸ್ಕರಲ್ಲಿ ರಕ್ತದೊತ್ತಡ, ಸ್ಥೂಲಕಾಯ ಹೆಚ್ಚು ಮಾಡುತ್ತದೆ.
ಇನ್ನು ಸಂಕ್ಷಿಪ್ತವಾಗಿ ಹೇಳಬೇಕಾದರೆ, ದಿನನಿತ್ಯ ನಾವು ಸೇವಿಸುವ ಆಹಾರದಿಂದ ಉಂಟಾಗುವ ಶಾರೀರಿಕ ತ್ಯಾಜ್ಯವನ್ನು ಹೊರಹಾಕಲು ಯಾವ ರೀತಿ ನಾವು ಪ್ರತಿನಿತ್ಯ ಶೌಚಾಲಯಕ್ಕೆ ಹೋಗುತ್ತಿವೋ, ಅದೇ ರೀತಿ ಮಾನಸಿಕ ತ್ಯಾಜ್ಯಗಳನ್ನು ಹೊರಹಾಕಲು ಪ್ರತಿನಿತ್ಯ ನಾವು ಎಂಟು ಗಂಟೆಗಳ ಗಡತ್ತಾದ ನಿದ್ದೆ ಮಾಡಬೇಕು.
ಸಂಶೋಧನೆಯ ಪ್ರಕಾರ, ಬೇಸಿಗೆ ಕಾಲದಲ್ಲಿ ಒಂದು ಗಂಟೆ ಕಡಿಮೆ ನಿದ್ರೆ ಮಾಡಿದರೆ ಮುಂದಿನ ದಿನ ಶೇಕಡ 24 ರಷ್ಟು ಹೃದಯಘಾತವಾಗುವ ಸಂಭವವಿರುತ್ತದೆ.
ಚಳಿಗಾಲದ ಸಮಯದಲ್ಲಿ ಒಂದು ಗಂಟೆ ಹೆಚ್ಚು ನಿದ್ರೆ ಮಾಡಿದರೆ, ಅದರ ಮುಂದಿನ ದಿನ ಹೃದಯಾಘಾತದ ಸಂಭವ ಶೇ. 21ರಷ್ಟು ಕಡಿಮೆಯಾಗುತ್ತದೆ.
ಆದ್ದರಿಂದ ದಿನಕ್ಕೆ ಎಂಟು ಗಂಟೆ ನಿದ್ರೆ ಮಾಡುವವರೇ ಶ್ರೀಮಂತರು!
ಈಗ ನಿದ್ರಾಹೀನತೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ...
1965ನೇ ಇಸವಿಯಲ್ಲಿ 17 ವರ್ಷದ ವಿದ್ಯಾರ್ಥಿ ನಿದ್ರೆನೇ ಮಾಡದೇ ಹೋದರೆ ಏನಾಗುತ್ತೆ ಅಂತ
264 ಗಂಟೆ ಅಂದರೆ 11 ದಿನ ಎಚ್ಚರವಾಗಿ ಸಂಶೋಧನೆಗೆ ಒಳಪಟ್ಟಿದ್ದ. 11 ದಿನಗಳ ನಂತರ ಅವನ ದೃಷ್ಟಿ ಕಡಿಮೆಯಾಗಿ, ವಸ್ತುಗಳನ್ನು ಸ್ಪರ್ಶದಿಂದ ಗುರಿತಿಸುವುದು ಕಡಿಮೆಯಾಯಿತು. ತದನಂತರ ನೆನಪಿನ ಶಕ್ತಿ ಕ್ಷೀಣಿಸುತ್ತಾ ಹೋಗಿ ಕೊನೆಗೆ ಬುದ್ಧಿಬ್ರಮಣೆಯಾಗುತ್ತಾ ಹೋಯಿತು.
ಇನ್ನೊಂದು ಉದಾಹರಣೆಯಲ್ಲಿ,
2014ರಲ್ಲಿ ಫುಟ್ಬಾಲ್ ಪ್ರೇಮಿಯೊಬ್ಬರು ಸತತ 48 ಗಂಟೆಗಳ ಕಾಲ ಫುಟ್ಬಾಲ್ ವರ್ಲ್ಡ್ ಕಪ್ ನೋಡುತ್ತಾ ಶಿವನಪಾದ ಸೇರಿದ್ದ. ಅದಕ್ಕೆ ವೈದ್ಯಕೀಯ ಕಾರಣ ಕಡಿಮೆ ನಿದ್ರೆಯಿಂದ ಲಕ್ವ ಹೊಡೆದು ಮೃತಪಟ್ಟಿದ್ದ.
ಈಗ ನಮ್ಮ ಪುನೀತ್ ರಾಜಕುಮಾರ್ ರವರ ದಿನಚರಿ ನೆನಪಿಸಿಕೊಳ್ಳಿ. ಪ್ರತಿನಿತ್ಯ ರಾತ್ರಿ ಲೇಟ್ ನೈಟ್ ಪಾರ್ಟಿಗಳು ಮತ್ತು ಮುಂಜಾನೆ ತೀವ್ರವಾದ ದೈಹಿಕ ವ್ಯಾಯಾಮಗಳು. ಅವರ ಸಾವಿಗೆ ಕಡಿಮೆ ನಿದ್ರೆಯ ಜೊತೆ ಸೆಲೆಬ್ರಿಟಿ ಒತ್ತಡವು ಒಂದು ಕಾರಣವಿರಬಹುದು. ಇದೇ ಕಾರಣಕ್ಕೆ ಪ್ರತಿನಿತ್ಯ ಪ್ರಪಂಚದಲ್ಲಿ ನೂರಾರು ಜನ ಸಾಯುತ್ತಾ ಇರುತ್ತಾರೆ ಅವರ್ಯಾರು ಸೆಲೆಬ್ರಿಟಿ ಆಗದೇ ಇರುವುದರಿಂದ ನಮಗೆ ಗೊತ್ತಿರುವುದಿಲ್ಲ ಅಷ್ಟೇ.
8 ಗಂಟೆ ಸುಖನಿದ್ರೆಯ ಮೊದಲ ಸೂತ್ರವೇ ಕ್ರಮಬದ್ಧ ಜೀವನ ಶೈಲಿ. ಅದು ಶನಿವಾರವಾದರೂ ಇರಬಹುದು ಅಥವಾ ಸೋಮವಾರವಾದರೂ ಇರಬಹುದು, ದಿನನಿತ್ಯ ರಾತ್ರಿ ಒಂದೇ ಸಮಯಕ್ಕೆ ಮಲಗಬೇಕು ಮತ್ತು ಬೆಳಿಗ್ಗೆ ಒಂದೇ ಸಮಯಕ್ಕೆ ಎದ್ದೇಳಬೇಕು.
ಎರಡನೇ ಸೂತ್ರವೆಂದರೆ ಮಲಗುವ ರೂಮಿನ ಉಷ್ಣಾಂಶವನ್ನು 18° ಡಿಗ್ರಿ ಸೆಲ್ಸಿಯಸ್ ಇರುವಂತೆ ನೋಡಿಕೊಂಡರೆ ಉತ್ತಮ ನಿದ್ರೆ ಬರುತ್ತದೆ.
ಮೂರನೇ ಸೂತ್ರವೆಂದರೆ ರಾತ್ರಿ 8 ಗಂಟೆಗೆ ಮೊದಲೇ ಊಟ ಮುಗಿಸಿ, 10 ಗಂಟೆಯ ಒಳಗೆ ಮಲಗಿದರೆ ಬೆಳಗ್ಗೆ 6 ಗಂಟೆಗೆ ಎದ್ದೇಳಬಹುದು.
ಕೊನೆಯದಾಗಿ ಹೆಚ್ಚು ನಿದ್ರೆ ಮಾಡಿದರಷ್ಟೇ ಜಾಸ್ತಿ ದಿನ ಬದುಕಬಹುದು ಅಂತ ಏನಾದರೂ ಎಂಟು ಗಂಟೆಗಿಂತ ಜಾಸ್ತಿ ಮಲಗಿದರೆ, ಭಗವದ್ಗೀತೆಯಲ್ಲಿ ಹೇಳಿರುವಂತೆ ದುಃಖ ದಾರಿದ್ಯ ನಮ್ಮನ್ನು ಅಟ್ಟಾಡಿಸಿಕೊಂಡು ಬರುತ್ತದೆ ಮತ್ತು ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬದುಕಲು ನಿಜವಾಗಲೂ ಸಾಧ್ಯವಿಲ್ಲ.
-- ಪ್ರೊ. ಸಂತೋಷ್ ಮಂಡ್ಯಗೌಡ